ಆಚಾರ್ಯ ದೇವೋಭವ

Wednesday, February 15th, 2012

ಆಚಾರ್ಯ ದೇವೋಭವ

-ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ

ನನ್ನ ಬದುಕನ್ನು ರೂಪಿಸಿದ, ಗುರುಸಮಾನರೇ ಆಗಿದ್ದ, ಬಂಧುಬಾಧವರಿಗಿಂತಲೂ ಮಿಗಿಲಾದ ಸ್ಥಾನದಲ್ಲಿದ್ದ ಡಾ|ವಿ.ಎಸ್.ಆಚಾರ್ಯ ಅವರನ್ನು ಕಳೆದುಕೊಂಡು ನಾನು ವಸ್ತುಶಃ ಅನಾಥನಾಗಿದ್ದೇನೆ ಅನಿಸುತ್ತಿದೆ. ನನ್ನ ಉದ್ದಶಿತ ಹಾದಿಯಲ್ಲಿ ನಾನು ಏಕಾಂಗಿಯಾದೆನೋ ಎಂಬ ಒಂಟಿತನದ ಭಾವನೆ ಕಾಡುತ್ತಿದೆ. ನಾನು ಸಾಮಾಜಿಕವಾಗಿ, ರಾಜಕೀಯವಾಗಿ, ಆಡಳಿತಾತ್ಮವಾಗಿ ಇಂದು ಯಾವುದೇ ಸ್ಥಾನಕ್ಕೆ ಏರಿದ್ದೇನೆ ಎಂದಾದರೆ ಅದಕ್ಕೆ ಡಾ| ಆಚಾರ್ಯರೇ ಕಾರಣಪುರಷರು. ನಿಜ ಅರ್ಥದಲ್ಲಿ ಅವರು ನನ್ನ ಆಚಾರ್ಯರು

ನನ್ನ ರಾಜಕೀಯ ಜೀವನದಲ್ಲಿ ಈವರೆಗೆ ಯಾವುದೇ ಸಮಸ್ಯೆಗಳು ಬಂದರೂ ಅದಕ್ಕೆ ಅವರು ಪರಿಹಾರ ನೀಡುತ್ತಿದ್ದರು. ಹಾಗೆ ನೋಡಿದರೆ ಪ್ರತಿಯೊಂದು ನಿರ್ಧಾರದ ಹಿನ್ನಲೆಯಲ್ಲಿಯೂ ಅವರಿದ್ದರು. ಆಚಾರ್ಯರಲ್ಲಿ ಕೇಳದೇ ಯಾವ ನಿರ್ಧಾರವನ್ನೂ ನಾನು ಈವರೆಗೆ ಕೈಗೊಂಡವನಲ್ಲ. ಅವರ ಮಾರ್ಗದರ್ಶನ ನನ್ನ ಯಶಸ್ಸಿಗೆ ಕಾರಣವಾಗುತ್ತಿತ್ತು ಅನ್ನುವುದು ವಾಸ್ತವ. ಈಗ ಅವರನ್ನು ಕಳೆದುಕೊಂಡು ನಾನು ತೀವ್ರವಾದ ಮಾನಸಿಕ ಮತ್ತು ಭಾವನಾತ್ಮಕ ಶೂನ್ಯವನ್ನು ಎದುರಿಸುವ ಹಾಗಾಗಿದೆ.

ನಾವು ಪ್ರತಿದಿನ ಎಂಬಂತೆ ಸಂಪರ್ಕದಲ್ಲಿದ್ದೆವು. ದೂರ ಊರುಗಳಲ್ಲಿದ್ದರೆ ದೂರವಾಣಿ ಮೂಲಕವಾದರೂ ಮಾತನಾಡುತ್ತಿದ್ದೆವು. ನಿನ್ನೆ ರಾತ್ರಿಯಷ್ಟೇ ನನ್ನೊಂದಿಗೆ ಮಾತನಾಡಿದ ಅವರು ಮಂಗಳವಾರ ಭೇಟಿಯಾಗುವುದಾಗಿ ತಿಳಿಸಿದರು. ಈ ಭಾರಿಯ ಮುಂಗಡ ಪತ್ರ ರೂಪಿಸಲು ನನಗೆ ಅವರೇ ಮಾರ್ಗದರ್ಶಕರಾಗಿದ್ದರು. ಅವರ ಸಲಹೆ ಸೂಚನೆಯಂತೆಯೇ ನಾನು ಮುಂಗಡ ಪತ್ರವನ್ನು ಸಿದ್ಧಪಡಿಸುತ್ತಿದ್ದೆ. ಈಭಾರಿಯ ಮುಂಗಡ ಪತ್ರ ಅದು ರಾಜ್ಯಮಟ್ಟ ಮತ್ತು ದೇಶದ ಇತಿಹಾಸದಲ್ಲಿಯೇ ಮಾದರಿಯಂತಾಗಲಿದೆ ಎಂದು ನನ್ನ ಬೆನ್ನು ತಟ್ಟಿದ್ದ ಅವರು ಬಹಳ ಒಳ್ಳೆಯ ಆಡಳಿತ ನೀಡುತ್ತಿದ್ದೀರಿ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು.

ಅಕ್ಕಿಗೇಟ್ ಹೋರಾಟ: ನನಗೆ ನೆನಪಾಗುತ್ತಿದೆ. ನಾನು ಪುತ್ತೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ. ಆಗಿನ ಸರಕಾರದ ಅಕ್ಕಿ ಸಾಗಾಟಕ್ಕೆ ಸಂಬಂಧಪಟ್ಟ ಹಾಗೆ ವಿವಿಧ ನಿರ್ಬಧಗಳನ್ನು ವಿಧಿಸಿತ್ತು. ಅಕ್ಕಿಗೇಟ್ ಗಳೆಂಬ ವ್ಯವಸ್ಥೆಯು ಜಾರಿಯಾಗಿದ್ದು, ಇದರಿಂದ ರೈತಾಪಿ ವರ್ಗಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ನಾನು ಸಮಾನಮನಸ್ಕರೊಂದಿಗೆ ಹೋರಾಟ ಆರಂಭಿಸಿದ್ದೆ. ಆ ಸಂದರ್ಭದಲ್ಲಿ ಸುಳ್ಯಕ್ಕೆ ಬಂದಿದ್ದ ಆಚಾರ್ಯರು ನನ್ನನ್ನು ಕರೆದು ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ ಎಂದಿದ್ದರು. ಜನಪರ ಹೋರಾಟದ ನಿಮ್ಮ ನಾಯಕತ್ವ ವಿಸ್ತಾರರೂಪ ಪಡೆಯಲಿ ಎಂದು ಅಂದೇ ಹಾರೈಸಿದ್ದರು. ಆಗ ಅವರು ಉಡುಪಿ ನಗರಸಭೆಯ ಅಧ್ಯಕ್ಷರಾಗಿದ್ದು, ರಾಷ್ಟ್ರೀಯ ಜನಪ್ರಿಯತೆ ಪಡೆದವರು. ತಲೆಯಲ್ಲಿ ಮಲ ಹೊರುವ ಅಮಾನವೀಯತೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸುವ ಮೂಕ ಕ್ರಾಂತಿಕಾರಕ ಅಭಿಯಾನ ಆರಂಭಿಸಿದವರು. ವೈಧ್ಯರಾಗಿದ್ದು ಪ್ರಸಿದ್ಧರಾಗಿದ್ದರು. ಜನಸಂಘ ಎಂಬ ಪಕ್ಷವನ್ನು ಆಕಾಲದಲ್ಲಿ ಕಟ್ಟಿ ಬೆಳೆಸಲು ಸಮರ್ಪಣಾ ಭಾವದಿಂದ ದುಡಿಯುತ್ತಿದ್ದರು. ನಾನು ಸಹಜವಾಗಿ ಅವರತ್ತ ಆಕರ್ಷಿತನಾದೆ. ಅನಂತರ ನಮ್ಮ ನಡುವೆ ನಿರಂತರ ಸಂಪರ್ಕ ಬೆಳೆಯಿತು.

ನಿತ್ಯ ಸಂಪರ್ಕ: ಮುಂದೆ ನಾನು ಕಾನೂನು ವ್ಯಾಸಂಗಕ್ಕೆ ಉಡುಪಗೆ ತೆರಳಿದಮೇಲೆ ಪ್ರತಿದಿನ ಎಂಬಂತೆ ಅವರ ಸಂಪರ್ಕವನ್ನು ಪಡೆದುಕೊಂಡೆ. ಆಗ ಅವರು ವಿದ್ಯಾರ್ಥಿ ಸಂಘಟನೆಗಳಲ್ಲಿ ತನ್ನನು ಸಕ್ರಿಯನಾಗುವಂತೆ ಪ್ರೇರೇಪಿಸಿ ವಿದ್ಯಾರ್ಥಿ ನಾಯಕನನ್ನಾಗಿ ರೂಪಿಸಿದರು. ದೇಶದಲ್ಲಿ ತುರ್ತು ಪರಿಸ್ಥಿತಿಯು ಜಾರಿಗೊಂಡಾಗ ನಾವೆಲ್ಲ ತೀವ್ರ ಹೋರಾಟದ ಮುಂಚೂಣಿಯಲ್ಲಿದೆವು. ಆಚಾರ್ಯ ಅವರು ಸೆರೆವಾಸ ಅನಭವಿಸಬೇಕಾಯಿತು. ನಾನು ಕೂಡ ಬಂಧನಕ್ಕೆ ಒಳಗಾಗಿದ್ದೆ. ತುರ್ತುಪರಿಸ್ಥಿತಿಯ ಅನಂತರದ ಬೆಳವಣಿಗೆಗಳು ನನ್ನನ್ನು ಆಚಾರ್ಯರ ಮೂಲಕ ರಾಜಕೀಯಕ್ಕೆ ಪ್ರವೇಶಿಸುವಂತೆ ಮಾಡಿತ್ತು. ಆಗ ಜನತಾಪಕ್ಷ ಅಸ್ತಿತ್ವಕ್ಕೆ ಬಂತು. ಆಚಾರ್ಯರೇ ಹಿರಿಯ ನಾಯಕರಾಗಿದ್ದರು. ನಾನು ಸುಳ್ಯಕ್ಕೆ ಗಮನ ಹರಸಿದೆ. ಆಗ ಸುಳ್ಯ ಮೀಸಲು ಕ್ಷೇತ್ರ. ಅಲ್ಲಿ ನಾವು ಸಂಘಟನಾತ್ಮಕ ಯಶಸ್ಸನ್ನು ಸಧಿಸಿದೆವು. ಮುಂದಿನ ಹಂತದಲ್ಲಿ ಭಾರತೀಯ ಜನತಾ ಪಕ್ಷವು ಅಸ್ತಿತ್ವಕ್ಕೆ ಬಂತು. ಬಿಜೆಪಿಗೆ ಕರಾವಳಿಯ ಈ ಜಿಲ್ಲೆಗಳಲ್ಲಿ ಜನಪ್ರಿಯತೆಯನ್ನು ಆಚಾರ್ಯ ಅವರು ತಮ್ಮ ನಾಯಕತ್ವಲ್ಲಿ ಒದಗಸಿಕೊಟ್ಟರು. ನಾನು ಸುಳ್ಯ, ಪುತ್ತೂರು ಪ್ರದೇಶಗಳಿಂದ ಅವಿಭಜಿತ ಜಿಲ್ಲಾ ವ್ಯಾಪ್ತಿಯ ಕೆಲವು ಜವಾಬ್ಧಾರಿಗಳನ್ನು ಹೊಂದುವಂತೆ ಅವರು ಅವಕಾಶ ಮಾಡಿಕೊಟ್ಟರು. ಆಚಾರ್ಯರ ನಾಯಕತ್ವದಲ್ಲಿ 1983ರಲ್ಲಿ ಬಿಜೆಪಿಯು ರಾಜ್ಯ ವಿಧಾನಸಭೆಗೆ ಪಾದಾರ್ಪಣೆ ಮಾಡಿತು. ಈ ಅಭಿಯಾನದಲ್ಲಿ ಕೂಡ ನಾನು ಭಾಗವಹಿಸಿದ್ದೆ. ಈ ಹಂತದಲ್ಲಿ ಅವರು ನನ್ನನ್ನು ಮತ್ತಷ್ಟು ಸಕ್ರಿಯನನ್ನಾಗಿ ರೂಪಿಸಿದರು. ಈ ಮೂಲಕ ನಾನು ಕರ್ನಾಟಕ ವಿಧಾನಸಭೆಗೆ ಪುತ್ತೂರಿನಿಂದ ಆಯ್ಕೆಯಾಗುವ ಅವಕಾಶವೂ ದೊರೆಯಿತು.

ಮಹತ್ವದ ಕಾಣಿಕೆ: ವಿಧಾನಸಭೆಯ ಅಧಿವೇಶನಗಳಿಗೆ ಭಾಗವಹಿಸುವ ಮೊದಲು ನಾನು ಆಚಾರ್ಯರ ಸಲಹೆಯನ್ನು ಪಡೆದುಕೊಳ್ಳುತ್ತಿದ್ದೆ. ಶಾಸನಸಭೆಗಳ ಸದಸ್ಯರಾಗಿ ಅವರಿಗಿದ್ದ ಅನಭವದ ಅನೇಕ ವಿಚಾರಗಳನ್ನು ಅವರು ತಿಳಿಸಿಕೊಡುತ್ತಿದ್ದರು. ಯಾವ ವಿಚಾರಗಳನ್ನು ಯಾವ ರೀತಿಯಲ್ಲಿ ಪ್ರಸ್ತಾವಿಸಬೇಕೆಂದು ತಿಳಿಸಿಕೊಡುತ್ತಿದ್ದರು. ಈ ಮೂಲಕ ನಾನು ಯಶಸ್ವಿಯಾಗಿ ನನ್ನ ಕ್ಷೇತ್ರದ ವಿಚಾರಗಳನ್ನು ಸದನದಲ್ಲಿ ಮಂಡಿಸಲು ಸಾಧ್ಯವಾಯಿತು.

ಫ್ರೆಂಡ್, ಫಿಲಾಫರ್, ಗೈಡ್: ಆಚಾರ್ಯರು ನನ್ನ ಹಿತಾಕಾಂಕ್ಷಿಗಳು ಮಾತ್ರವಲ್ಲ, ಅವರು ನನ್ನ ಫ್ರೆಂಡ್, ಫಿಲಾಫರ್, ಗೈಡ್ ಕೂಡ ಆಗಿದ್ದರು. ನನ್ನ ಮೇಲೆ ಅವರು ಇಷ್ಟೊಂದು ಪ್ರೀತಿಯನ್ನು ಹೇಗೆ ಹೊಂದಿದ್ದರು ಎಂಬುದು ನನ್ನ ಪಾಲಿಗೆ ಇನ್ನೂ ನಿಗೂಢವೇ. ಆದರೆ ಅವರು ತೋರಿದ ಪ್ರೀತಿ, ವಿಶ್ವಾಸ, ಕಳಕಳಿ, ಮಾರ್ಗದರ್ಶನ ಇವೆಲ್ಲವೂ ನನ್ನ ಪಾಲಿಗೆ ಅನನ್ಯವೇ ಆಗಿದೆ. ಆಚಾರ್ಯರು ತಮ್ಮ ಜ್ಞಾನವನ್ನುಇತರರೊಂದಿಗೆ ಹಂಚಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದರು. ಆದ್ದರಿಂದಲೇ ಅವರದ್ದು ಸರ್ವಮಾನ್ಯ ವ್ಯಕ್ತಿತ್ವ. ರಾಷ್ಟ್ರೀಯ ನಾಯಕರು ಕೂಡ ಅವರ ಮೇಲೆ ಅಪಾರ ಗೌರವವನ್ನು ಇರಿಸಿದ್ದರು. ವಾಜಪೇಯಿ, ಆಡ್ವಾಣಿ ಮುಂತಾದ ನಾಯಕರ ಪಾಲಿಗೆ ಆಚಾರ್ಯರು ಗೌರವದ ವ್ಯಕ್ತಿತ್ವವಾಗಿದ್ದರು.

ವಾಜಪೇಯಿ ಜೊತೆಗೆ…: 80ರ ದಶಕದ ಆದಿಭಾಗದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಕೇರಳದಲ್ಲಿ ರಾಷ್ಟ್ರೀಯತೆಗೆ ಸಂಬಂಧಿಸಿದ ಒಂದು ಬೃಹತ್ ರ್‍ಯಾಲಿಗೆ ನಾವು ನಾಲ್ಕು ಮಂದಿ- ವಾಜಪೇಯಿ-ಆಚಾರ್ಯ-ಕಾಸರಗೋಡಿನ ನಾರಾಯಣ ಭಟ್ ಮತ್ತು ನಾನು ಮಂಗಳೂರಿನಿಂದ ಕಾರಿನಲ್ಲಿ ತೆರಳಿದ್ದೆವು. ವಿಶೇಷವೆಂದರೆ ಕಾರು ಚಾಲನೆ ಮಾಡಿದ್ದು ಆಚಾರ್ಯರು. ಈ ಪ್ರವಾಸದ ಸಂದರ್ಭದಲ್ಲಿ ವಾಜಪೇಯಿ ಅವರ ಉತ್ತುಂಗ ವ್ಯಕ್ತಿತ್ವ ಮತ್ತು ವಾಜಪೇಯಿ ಅವರಿಗೆ ಆಚಾರ್ಯರಲ್ಲಿದ್ದ ಗೌರವವನ್ನು ನಾನು ಅತಿ ಸಮೀಪದಲ್ಲೇ ತಿಳಿದುಕೊಳ್ಳುವಂತಾಯಿತು. ನಾನು ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಲು ಸಾಧ್ಯವಾದದ್ದು ಕೂಡ ಅವರ ಸಹಕಾರದಿಂದ. ಬಿಜೆಪಿಯ ರಾಜ್ಯಾಧ್ಯಕ್ಷನ ಹೊಣೆಗಾರಿಕೆಯನ್ನು ಈ ಯುವಕ ಯಶಸ್ವಿಯಾಗಿ ನಿಭಾಯಿಸಬಲ್ಲರು ಎಂದು ಆಚಾರ್ಯರು ಬಿಜೆಪಿಯ ವರಿಷ್ಠ ನಾಯಕರಲ್ಲಿ ಹೇಳಿದ್ದರು. ನಿರ್ಣಾಯಕವಾದ ಕಾಲಘಟ್ಟದಲ್ಲಿ ಈ ಹೊಣೆಗಾರಿಕೆಯನ್ನು ನಾನು ನಿರ್ವಹಿಸಿದೆ. ಪಕ್ಷ ಅಧಿಕಾರಕ್ಕೆ ಕೂಡ ಬಂದಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಚಾರ್ಯರು ಅನೇಕ ವಿಚಾರಗಳಲ್ಲಿ ಅವರಿಗೆ ಮತ್ತು ಸಚಿವ ಸಂಪುಟಕ್ಕೆ ತಮ್ಮ ಜ್ಞಾನದ ಸಂಪನ್ಮೂವನ್ನು ಒದಗಿಸುತ್ತಿದ್ದರು.

ಆತ್ಮವಿಶ್ವಾಸ ತುಂಬಿದರು: ನನ್ನ ವೈಯಕ್ತಿಕ ಬದುಕಿನಲ್ಲಿ ಕೂಡ ಅವರು ಆತ್ಮವಿಶ್ವಾಸವನ್ನು ತುಂಬಿದವರು. ಓರ್ವ ಪುತ್ರನನ್ನು ನಾನು ಅಪಘಾತದಲ್ಲಿ ಕಳೆದುಕೊಂಡೆ. ಮತ್ತೋರ್ವ ಪುತ್ರ ಅಪಘಾತದಿಂದ ಪಾರಾಗಿ ಬಂದ. ನಾನು ಕೂಡ ಅನಾರೋಗ್ಯ ಅನುಭವಿಸಬೇಕಾಗಿತ್ತು. ಈ ಎಲ್ಲಾ ಸಂದರ್ಭಗಳಲ್ಲಿಯೂ ಅವರು ನನ್ನ ಪಾಲಿಗೆ ಚೈತನ್ಯ ತುಂಬಿದ ಮಹಾಪುರುಷ. ನನ್ನ ಆರೋಗ್ಯದ ಬಗ್ಗೆ ಅವರು ತೋರಿದ ಕಾಳಜಿಗೆ ನಾನು ಮೂಕವಿಸ್ಮಿತನಾಗಿದ್ದೆ. ಅಷ್ಟೊಂದು ತೀವ್ರವಾಗಿ ಅವರು ನನ್ನ ಕುರಿತು ಸ್ಪಂದಿಸುತ್ತಿದ್ದರು. ಅತಿ ಪ್ರಮುಖವಾದ ಒಂದು ಹಂತದಲ್ಲಿ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ನಾನು ಮಖ್ಯಮಂತ್ರಿಯಾಗಿ ಆಯ್ಕೆಯಾಗುವಲ್ಲಿ  ಆಚಾರ್ಯರ ಮಹತ್ವದ ಪಾತ್ರವಿತ್ತು. ಈ ಸಂದಿಗ್ಧ ಕಾಲದಲ್ಲಿ ಸರಕಾರದ ನಾಯಕತ್ವವನ್ನು ಸದಾನಂದ ಗೌಡರೇ ವಹಿಸಿಕೊಳ್ಳಲಿ. ಎಲ್ಲರನ್ನು ಜತೆಯಾಗಿ ಕರೆದೊಯ್ಯುವ ಸಾಮರ್ಥ್ಯ ಅವರಲ್ಲಿದೆ ಎಂದು ಆಚಾರ್ಯರು ಎಲ್ಲಾ ನಾಯಕರಿಗೂ ಮನದಟ್ಟು ಮಾಡಿದರು. ನಾನು ಅಧಿಕಾರ ಸ್ವೀಕರಿಸುವಾಗಲೂ ನನ್ನಲ್ಲಿ ಧೈರ್ಯ, ಸ್ಥೈರ್ಯ ತುಂಬಿದ್ದರು. ನನ್ನ ಸಚಿವ ಸಂಪುಟಕ್ಕೆ ಅವರು ಅಪೂರ್ವ ಶಕ್ತಿಯಾಗಿದ್ದರು. ಅವರ ಜ್ಞಾನ ಬಂಡಾರವೇ ನಮ್ಮ ಪಾಲಿಗೆ ಅಪೂರ್ವ ಶಕ್ತಿಯಾಗಿತ್ತು. ಅವರು ಎಂದಿಗೂ ತಾಳ್ಮೆ ಕಂಡುಕೊಂದವರಲ್ಲ. ಸದಾ ಹಸನ್ಮುಖಿ. ಸದಾ ಕಾರ್ಯನಿರತ. ಸದಾ ಅಧ್ಯಯನಶೀಲ. ಈ ಗುಣಗಳನ್ನು ಬೇರೆಯವರಲ್ಲಿ ಕಾಣುವುದ ಅಷ್ಟೊಂದು ಸುಲಭವಲ್ಲ. ರಾಜಕೀಯ ವ್ಯಕ್ತಿಯೋರ್ವರು ತನ್ನ ಅಸಾಧಾರಣವಾದ ಸಾಮಾಜಿಕ ಬದ್ಧತೆಯಿಂದ ಹೇಗೆ ಗೌರವಾನ್ವಿತ ಮುತ್ಸದ್ದಿಯಾಗಿ ರೂಪುಗೊಳ್ಳುತ್ತಾನೆ ಅನ್ನುವುದಕ್ಕೆ ಆಚಾರ್ಯರಂತಹ ಉದಾಹರಣೆ ಇನ್ನೊಂದಿಲ್ಲ.

 ಕೋಪ ಬೇಡ : ನಾನು ಬೇರೆ ಬೇರೆ ಸಂದರ್ಭಗಳಲ್ಲಿ ಕೋಪ ಮಾಡಿಕೊಳ್ಳುವುದಿತ್ತು . ಆಗೆಲ್ಲಾ ನನ್ನನ್ನು ಕರೆದು ಬುದ್ದಿವಾದ ಹೇಳುತಿದ್ದರು. ಯಾವ ಸಂದರ್ಭದಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಎಲ್ಲವನ್ನು  ತಾಳ್ಮೆಯಿಂದ ನಿಭಾಯಿಸಬೇಕು. ಇದು ಯಶಸ್ವಿ ನಾಯಕತ್ವದ ಲಕ್ಷಣ ಎಂದು ತಿಳಿ ಹೇಳುತಿದ್ದರು. ನನ್ನ ವ್ಯಕ್ತಿತ್ವದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಅವರೇ ಕಾರಣ ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ . ಮುಂದೆಯೂ ಅವರು ತೋರಿದ ಮಾರ್ಗದಲ್ಲೇ ನಾನು ಸಾಗುತ್ತೇನೆ. ನಾನು ಮುಖ್ಯಮಂತ್ರಿಯಾದ ಬಳಿಕ ನನ್ನ ಆಡಳಿತಾತ್ಮಕ ಹಾದಿ, ರಾಜಕೀಯವಾದ ಸನ್ನಿವೇಶಗಳೆಲ್ಲ ಹೂವಿನ ಹಾಸಿಗೆಯಾಗಿ ಇಲ್ಲ. ಅನೇಕ ಸಮಸ್ಯೆಗಳನ್ನು ನಾನು ಎದುರಿಸುವುದು ಅನಿವಾರ್ಯವಾಗಿದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಅವರು ಸೂಚಿಸುತ್ತಿದ್ದರು. ಆದ್ದರಿಂದ ನನಗೆ ತೃಪ್ತಿಕರವಾದ ಆಡಳಿತ ನೀಡಲು ಸಾಧ್ಯವಾಗಿದೆ ಎಂದು ನನಗೆ ಅನಿಸುತ್ತದೆ. ಇದೆ ರೀತಿ ನೀವು ಮುಂದುವರಿಯಿರಿ. ರಾಜ್ಯ ಸುಭಿಕ್ಷವಾಗುತ್ತದೆ. ನಿಮ್ಮ ಆಡಳಿತ ಸರ್ವರಿಗೂ ಮಾದರಿಯಾಗುತ್ತದೆ. ಎಂದು ಅವರು ಆಶೀರ್ವದಿಸಿದರು.
ಈಗ ಮುಂಗಡಪತ್ರ ಮಂಡನೆಯ ಸಿದ್ದತೆಯಲ್ಲಿ ನಾನಿದ್ದೇನೆ. ಆರ್ಥಿಕವಾದ ವಿಚಾರಧಾರೆಗಳನ್ನು, ಚಿಂತನೆಗಳನ್ನು, ಯೋಜನೆಗಳನ್ನು ಅನರಿಂದ ನಾನು ತಿಳಿದುಕೊಳ್ಳುತ್ತಿದ್ದೆ. ಮುಂಗಡಪತ್ರಕ್ಕೆ ಜನಪರವಾದ ಸ್ಪರ್ಶ ನೀಡುವುದರಲ್ಲಿ ಅವರು ಅತ್ಯಂತ ಪರಿಣಿತರು. ಬಿಜೆಪಿಯ ರಾಷ್ಟ್ರೀಯ, ರಾಜ್ಯ ಪ್ರಣಾಳಿಕೆಯನ್ನು ಕೂಡ ರೂಪಿಸಿದ ಸಾಮರ್ಥ್ಯ ಅವರದು. ನಾನು ಮುಂಗಡಪತ್ರಕ್ಕೆ ಅವರ ಸೂಚನೆಯಂತೆ ಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಆದರೆ ಈಗ ಅವರಿಲ್ಲ. ನಾನು ಏನು ಮಾಡೋಣ ಎನ್ನುವ ಪ್ರಶ್ನೆಯೇ ನನ್ನೆದುರು ಬೃಹದಾಕಾರವಾಗಿ ನಿಂತಿದೆ. ಆದರೂ ಅವರು ನನಗಿತ್ತ ಆತ್ಮ ವಿಶ್ವಾಸದಿಂದ ಎಲ್ಲಾ ಸವಾಲುಗಳನ್ನೂ ಯಶಸ್ವಿಯಾಗಿ ನಿಭಾಯಿಸಬೇಕು ಎಂಬ ಕರ್ತವ್ಯ ಪ್ರಜ್ಞೆಯೂ ನನ್ನ ಮುಂದಿದೆ.

ಸದಾ ಕ್ರಿಯಾಶೀಲ: ಕೆಲವು ದಿನಗಳಿಂದ ಆಚಾರ್ಯ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಸ್ವಲ್ಪದಿನ ವಿಶ್ರಾಂತಿ ತೆಗೆದುಕೊಳ್ಳಿ ಎಂದು ನಾನು ಅವರಲ್ಲಿ ವಿನಂತಿಸಿದ್ದೆ. ಆದರೆ ಅವರು ಅದಕ್ಕೆ ಸಂಮತಿಸಿರಲಿಲ್ಲ. ನಿರಂತರವಾಗಿ ಚಟುವಟಿಕೆಗಳಲ್ಲಿ ಅವರು ನಿರತರಾಗಿದ್ದರು. ಅವರ ಜೀವನಶೈಲಿಯೇ ಹಾಗೆ. ಸದಾ ಕ್ರಿಯಾಶೀಲತೆ. ಒಂದು ಕ್ಷಣವನ್ನೂ ಅವರು ನಷ್ಟಮಾಡಲು ಬಯಸುವುದಿಲ್ಲ. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ 6 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಕಾರಣರಾದರು. ಈಗ ಉನ್ನತ ಶಿಕ್ಷಣ ಸಚಿವರಾಗಿ ಕರ್ನಾಟಕದಲ್ಲಿ 32 ವಿಶ್ವವಿದ್ಯಾನಿಲಯಗಳಿವೆ ಎಂಬುದು ಅನನ್ಯ ಸಾಧನೆ. ಇವೆಲ್ಲವೂ ಸಾಧ್ಯವಾದದ್ದು ಅವರ ದೂರದೃಷ್ಟಿಯಿಂದ ದೂರದರ್ಶಿತ್ವದಿಂದ ಮತ್ತು ಕರ್ತವ್ಯಪರತೆಯಿಂದ. ಆಚಾರ್ಯರ ಅಗಲುವಿಕೆಯ ಆಘಾತವನ್ನು ಸಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಕಣ್ಣೀರನ್ನು ಕಟ್ಟಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಪ್ರತಿಕ್ಷಣವೂ ಅವರ ಸ್ಮರಣೆಯೇ ನನ್ನ ಮುಂದಿದೆ…

.