ಪರಿಚಯ
ಶ್ರೀ ಡಿ.ವಿ. ಸದಾನಂದ ಗೌಡ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಕುಟುಂಬದ ಸಾಮಾನ್ಯ ಮನೆತನಕ್ಕೆ ಸೇರಿದ ವೆಂಕಪ್ಪಗೌಡ ಮತ್ತು ಕಮಲ ದಂಪತಿಗಳ ಸುಪುತ್ರನಾಗಿ ೧೯೫೩ ರಲ್ಲಿ ಸದಾನಂದ ಗೌಡರು ಜನಿಸಿದರು.
ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಸದಾನಂದ ಗೌಡರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದರು. ಆ ಬಳಿಕ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದಲ್ಲಿ ಕಾನೂನು ಶಿಕ್ಷಣವನ್ನು ಪೂರೈಸಿದರು. ಈ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿಯಾಗಿ ತನ್ನ ಸಂಘಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದರು.
೧೯೭೬ ರಲ್ಲಿ ಸುಳ್ಯ ಮತ್ತು ಪುತ್ತೂರು ನಗರಗಳಲ್ಲಿ ವಕೀಲ ವೃತ್ತಿಯನ್ನಾರಂಭಿಸಿದ ಸದಾನಂದ ಗೌಡರು ಅಲ್ಪ ಅವಧಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸರಕಾರಿ ಅಭಿಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಾಮಾಜಿಕ ಮತ್ತು ಸಾರ್ವಜನಿಕ ಜೀವನದಲ್ಲಿ ತಾನು ಇನ್ನಷ್ಟು ಸಕ್ರಿಯನಾಗಬೇಕಾದ ಅವಶ್ಯಕತೆಯನ್ನು ಮನಗಂಡ ಸದಾನಂದ ಗೌಡರು ಸರ್ಕಾರಿ ಅಭಿಯೋಜಕ ವೃತ್ತಿಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ತನ್ನನ್ನು ಸಾರ್ವಜನಿಕ ರಂಗದಲ್ಲಿ ತೊಡಗಿಸಿಕೊಂಡರು. ೧೯೮೧ ರಲ್ಲಿ ಡಾಟಿಯವರನ್ನು ವಿವಾಹವಾದ ಸದಾನಂದ ಗೌಡರ ಪುತ್ರ ಕಾರ್ತಿಕ್ ತಾಂತ್ರಿಕ ಶಿಕ್ಷಣ ಪೂರೈಸಿದ್ದಾರೆ.
ತನ್ನ ಸುದೀರ್ಘ ಸಾಮಾಜಿಕ ಜೀವನದುದ್ದಕ್ಕೂ ಸಮಾಜದ ವಿವಿಧ ರಂಗಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಸದಾನಂದ ಗೌಡರದ್ದು ನಿಜಕ್ಕೂ ಒಂದು ವೈವಿದ್ಯಮಯ ಬದುಕು. ಅವರ ಬಾಳಿನ ಪ್ರಮುಖ ಮಜಲುಗಳ ಪಕ್ಷಿನೋಟ ಇಲ್ಲಿದೆ.
ಸಹಕಾರಿ ರಂಗ:
ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದ ಸದಾನಂದ ಗೌಡರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ, ಎಸ್.ಕೆ.ಎ.ಸಿ.ಎಂ. ಸೊಸೈಟಿಯ ನಿರ್ದೇಶಕರಾಗಿ ಸುಳ್ಯದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ, ಮಂಡೆಕೋಲು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತು ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಭೂ ಅಡಮಾನ ಬ್ಯಾಂಕ್‌ಗಳ ಸಿಬಂಧಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾರ್ಮಿಕ ಆಂದೋಲನ:
ಶ್ರೀ ಡಿ.ವಿ. ಸದಾನಂದ ಗೌಡರು ಶ್ರಮಿಕ ವರ್ಗದ ನ್ಯಾಯೋಚಿತ ಹೋರಾಟಗಳಿಗೆ ನೇತೃತ್ವ ನೀಡುವ ಮೂಲಕ ಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರೆನಿಸಿಕೊಂಡಿದ್ದಾರೆ. ಸದಾನಂದ ಗೌಡರು ನಿರ್ವಹಿಸಿದ ಕಾರ್ಮಿಕ ರಂಗದ ವಿವಿಧ ಜವಾಬ್ದಾರಿಗಳು ಇಂತಿವೆ.
ಭಾರತೀಯ ಮಜ್ದೂರ್ ಸಂಘದ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ
ಸುಳ್ಯ ತಾಲೂಕು ಬೀಡಿ ಮಜ್ದೂರರ ಸಂಘದ ಅಧ್ಯಕ್ಷ ೧೯೭೭ ರಿಂದ ೧೯೮೨
ಸುಳ್ಯ ತಾಲೂಕು ಆಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ
ಕರ್ನಾಟಕ ಕೈಗಾರಿಕೆಗಳ ಸಿಬ್ಬಂದಿ ಯೂನಿಯನ್ ಅಧ್ಯಕ್ಷ
ರಾಜಕಾರಣ:
ನಾಡಿನ ರಾಜಕೀಯದ ಒಳ-ಹೊರಗುಗಳನ್ನು ಅರಿತುಕೊಳ್ಳಲು ಸಫಲವಾಗಿರುವ ಸದಭಿರುಚಿಯ ರಾಜಕಾರಣಿ ಸದಾನಂದ ಗೌಡರು ಭೂತಪೂರ್ವ ಜನಸಂಘದ ಪ್ರಾಥಮಿಕ ಸದಸ್ಯನಾಗಿ ರಾಜಕಾರಣಕ್ಕೆ ಧುಮುಕಿದವರು. ಭಾರತೀಯ ಜನತಾ ಪಾರ್ಟಿಯ ಸುಳ್ಯ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ದಕ್ಷಿಣಕನ್ನಡ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಜಿ.ಜೆ.ಪಿ.ಯ ಉಪಾಧ್ಯಕ್ಷರಾಗಿ, ಯುವ ಮೋರ್ಚಾದ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಮತ್ತು ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ವಿವಿಧ ಸ್ತರಗಳಲ್ಲಿ ಜವಾಬ್ದಾರಿಯನ್ನು ಹೊಣೆಯರಿತು ನಿಭಾಯಿಸಿದ ಸದಾನಂದ ಗೌಡರು ೨೦೦೬ ರಿಂದ ರಾಜ್ಯ ಬಿ.ಜೆ.ಪಿ.ಯ ಚುಕ್ಕಾಣಿ ಹಿಡಿದು ೨೦೦೮ ರಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಗಣನೀಯ ಪಾತ್ರ ವಹಿಸಿದ್ದಾರೆ.
ಶಾಸಕನಾಗಿ:
೧೯೮೯ ರಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸದಾನಂದ ಗೌಡರು ೧೯೯೪ ರಲ್ಲಿ ಮೊತ್ತ ಮೊದಲ ಬಾರಿಗೆ ಶಾಸಕನಾಗಿ ಚುನಾಯಿತರಾಗಿ ೧೯೯೯ ರಲ್ಲಿ ಪುನರಾಯ್ಕೆಯಾದರು. ಶಾಸಕನಾಗಿ ದ್ವಿತೀಯ ಅವಧಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ. ಶಾಸಕಾಂಗ ಪಕ್ಷದ ಉಪನಾಯಕನಾಗಿ ಆಯ್ಕೆಯಾದರು. ಹತ್ತು ವರ್ಷಗಳ ಸುದೀರ್ಘ ಶಾಸಕತ್ವದ ಅವಧಿಯಲ್ಲಿ ಸದಾನಂದ ಗೌಡರು ನಿರ್ವಹಿಸಿದ ವಿವಿಧ ಜವಾಬ್ದಾರಿಗಳು ಇಂತಿವೆ.
ಮಹಿಳಾ ದೌರ್ಜನ್ಯ ತಡೆಯ ಮೇಲಣ ಕರಡು ಮಸೂದೆ ರೂಪಿಸುವ ಸಮಿತಿಯ ಸದಸ್ಯ
ಶಕ್ತಿ, ಇಂಧನ ಮತ್ತು ವಿದ್ಯುಚ್ಛಕ್ತಿಯ ಕುರಿತಾದ ವಿಧಾನಸಭೆಯ ಸ್ಪೀಕರ್‌ರವರಿಂದ ರಚಿಸಲ್ಪಟ್ಟ ಸಮಿತಿಯ ಸದಸ್ಯ ೨೦೦೧-೦೨
ರಾಜ್ಯ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ರಂಗದ ಉದ್ದಿಮೆಗಳ ಸಮಿತಿಯ ಸದಸ್ಯ ೨೦೦೨-೦೩
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯನಾಗಿ ನಾಮನಿರ್ದೇಶನ ೨೦೦೩-೦೪
ಪುತ್ತೂರು ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷನಾಗಿ ಹತ್ತು ವರ್ಷಗಳಲ್ಲಿ ಸುಮಾರು ೩೫೦೦ಕ್ಕೂ ಮಿಕ್ಕಿದ ಆಶ್ರಯ ಮನೆಗಳ ವಿತರಣೆ ಮಾಡಿರುತ್ತಾರೆ.
ಪುತ್ತೂರು ತಾಲೂಕಿನ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷನಾಗಿ ಹತ್ತು ವರ್ಷಗಳಲ್ಲಿ ೧೭೦೦
ಕಡತಗಳನ್ನು ವಿಲೇವಾರಿ ಮಾಡಿ ಬಡ ಅರ್ಹ ಜನತೆಗೆ ಭೂಮಿಯನ್ನು ಸಕ್ರಮೀಕರಣಗೊಳಿಸಿದ್ದಾರೆ.
ಪುತ್ತೂರು ತಾಲೂಕು ಪಂಚಾಯತ್ ಉತ್ತಮ ಆಡಳಿತಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ
ಪಡೆಯಲು ತನ್ನ ಶಾಸಕತ್ವದ ಅವಧಿಯಲ್ಲಿ ಯೋಗ್ಯ ಹಾಗೂ ಸಮರ್ಥ ಮಾರ್ಗದರ್ಶನ ಮಾಡಿರುತ್ತಾರೆ.
ಅಡಿಕೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಚಿಂತಾಕ್ರಾಂತರಾಗಿದ್ದ
ನಾಡಿನ ಅಡಿಕೆ ಬೆಳೆಗಾರರಿಗೆ ದಕ್ಷ ನೇತೃತ್ವ ನೀಡಿರುವುದು ಸದಾನಂದ ಗೌಡರ ಸಾಧನೆಗಳ
ಕಿರೀಟಕ್ಕೊಂದು ತುರಾಯಿಯೆನಿಸಿದೆ.
ಸಂಸದನಾಗಿ:
ಜನರ ಸಮಸ್ಯೆಯ ಬೆನ್ನಟ್ಟಿ ಪರಿಹರಿಸುವ ಸದಾನಂದ ಗೌಡರ ಛಾತಿ ೨೦೦೪ ರಲ್ಲಿ ಅವರು ಮಂಗಳೂರು ಸಂಸದರಾಗಿ ಆಯ್ಕೆಯಾದ ಬಳಿಕ ಅವರಿಗೆ ಅನೇಕ ಅವಕಾಶಗಳನ್ನು ನೀಡಿತು. ಅವರು ಸಂಸದರಾದ ಬಳಿಕ ಇವರನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದ ಪಕ್ಷವು ಇವರಿಗೆ ಗೋವಾ ರಾಜ್ಯದ ಪಕ್ಷ ವ್ಯವಹಾರಗಳ ಉಸ್ತುವಾರಿ ವಹಿಸಿದಾಗ ಸದಾನಂದ ಗೌಡರು ರಾಷ್ಟ್ರ ಮಟ್ಟದಲ್ಲಿಯೂ ಗುರುತಿಸಲ್ಪಟ್ಟರು. ಭಾರತ ಸರಕಾರ ಸದಾನಂದ ಗೌಡರನ್ನು ೨೦೦೫ರಲ್ಲಿ ಕೇಂದ್ರ ಕಾಫಿ ಬೋರ್ಡಿನ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿತು. ಭಾರತೀಯ ಜನತಾ ಪಾರ್ಟಿಯ ವರಿಷ್ಠರು ಸದಾನಂದ ಗೌಡರ ಕೈಗೆ ೨೦೦೬ ರಾಜ್ಯ ಬಿ.ಜೆ.ಪಿ. ಘಟಕದ ಚುಕ್ಕಾಣಿಯನ್ನು ನೀಡಿದರು. ನಾಡಿನಾದ್ಯಂತ ಮಿಂಚಿನಂತೆ ಸಂಚರಿಸಿ ಪಕ್ಷದ ವಲಯದಲ್ಲ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸಿದುದರ ಪರಿಣಾಮವಾಗಿ ೨೦೦೭ ರಲ್ಲಿ ಇವರು ರಾಜ್ಯ ಬಿ.ಜೆ.ಪಿ. ಅಧ್ಯಕ್ಷರಾಗಿ ಪುರಾಯ್ಕೆಯಾದರು. ಮಾತ್ರವಲ್ಲ ೨೦೦೮ ರಲ್ಲಿ ರಾಜ್ಯದಲ್ಲಿ ಮೊತ್ತಮೊದಲ ಪೂರ್ಣ ಪ್ರಮಾಣದ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಹೊಣೆಯರಿತು ಕೆಲಸ ಮಾಡಿ ಪಕ್ಷದ ಹಿರಿಯರ ಮೆಚ್ಚುಗೆಗೆ ಪಾತ್ರರಾದರು.
ಕರಾವಳಿ ಕರ್ನಾಟಕದ ವಿಶಿಷ್ಠ ಕಲೆಯಾದ ಯಕ್ಷಗಾನ, ಕರಾವಳಿ ಜಿಲ್ಲೆಗಳ ಜಾನಪದೀಯ ನಡವಳಿಗಳು, ಶಟ್ಲ್ ಬ್ಯಾಡ್ಮಿಂಟನ್, ಟೆನ್ನಿಸ್ ಮೊದಲಾದವುಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಸದಾನಂದ ಗೌಡರು ಜನಾನುರಾಗಿ, ಹೋರಾಟಗಾರ, ಸಂಘಟಕರು, ನಿಸ್ಪ್ರಹ ವ್ಯಕ್ತಿತ್ವದ, ಅಧ್ಯಯನ ಶೀಲ, ರಾಷ್ಟ್ರೀಯವಾದಿ ಮತ್ತು ಪ್ರಾಮಾಣಿಕ ಜನಸೇವಕನಾಗಿ ನಾಡಿನ ರಾಜಕಾರಣದಲ್ಲಿ ವಿಶಿಷ್ಠ ಛಾಪು ಮೂಡಿಸಿರುವ ಡಿ.ವಿ. ಸದಾನಂದ ಗೌಡರು ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಬಂದು ಕರಾವಳಿ i ತ್ತು ಮಲೆನಾಡಿನ ಜನರ ಸೇವೆಗೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ.
ಸಂಸದರಾಗಿ ಮೊದಲ ವರ್ಷದಲ್ಲಿ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮಂಜೂರು ಮಾಡಿಸಿದುದು, ಇಂದಿರಾಗಾಂಧಿಯವರ ಕಾಲದಿಂದಲೇ ನನೆಗುದಿಗೆ ಬಿದ್ದಿದ್ದ ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಲೈನಿನ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿರುವುದು, ಕರಾವಳಿಯ ಜೀವನಾಡಿ ರಾಷ್ಟ್ರೀಯ ಹೆದ್ದಾರಿ ೧೭ ರ ಚತುಷ್ಪಥೀಕರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವುದು, ಮೀನುಗಾರಿಕೆಗೆ ಕೇಂದ್ರದಿಂದ ಮಂಜೂರಾಗಲು ಬಾಕಿಯಿದ್ದ ಪ್ರೋತ್ಸಾಹಕ ಕ್ರಮಗಳನ್ನು ತ್ವರಿತ ಮಂಜೂರಾತಿ ಮಾಡಿಸಿರುವುದೇ ಮೊದಲಾದ-ಸಾಧನೆಗಳನ್ನು ಡಿ.ವಿ. ಸದಾನಂದ ಗೌಡರು ಸಾಧಿಸಿದ್ದಾರೆ.
ಪಕ್ಷ ಸಂಘಟನೆಯನ್ನು ಕೂಡಾ ಆದ್ಯತೆಯ ನೆಲೆಯಲ್ಲಿ ಮಾಡುತ್ತಿರುವ ಡಿ.ವಿ. ಸದಾನಂದ ಗೌಡರು ಕಡೂರು ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದು ಬಿ.ಜೆ.ಪಿ.ಯ ವಿಜಯಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಇದರ ಸಂಘಟನಾ ಕೌಶಲ್ಯದ ಮೇಲೆ ಅಪಾರ ವಿಶ್ವಾಸ ಹೊಂದಿರುವ ಬಿಜೆಪಿಯ ಕೇಂದ್ರೀಯ ನಾಯಕತ್ವ ಡಿ.ವಿ.ಯವರಿಗೆ ಬಿ.ಜೆ.ಪಿ. ಕೇರಳ ಘಟಕದ ಉಸ್ತುವಾರಿಯ ಹೊಣೆ ವಹಿಸಿದೆ.
ವಿಜೇತ ಕ್ಷೇತ್ರ-ರಾಜ್ಯ-ಪಕ್ಷ-ಪರಿವಾರ ಹೀಗೆ ಬಹುಮುಖೀ ಚಟುವಟಿಕೆಗಳಲ್ಲಿ ಡಿ.ವಿ. ಸದಾನಂದ ಗೌಡರು ತನ್ನನ್ನು ತೊಡಗಿಸಿಕೊಂಡಿದ್ದು ದಣಿವರಿಯದ ಕೆಲಸಗಾರರೆನಿಸಿದ್ದಾರೆ.

